ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಯಕ್ಷ ರಸಿಕರ ಕಣ್ಮಣಿ ಸಂಪಾಜೆ ದಿವಾಕರ ರೈ

ಲೇಖಕರು : ಸತೀಶ್ ಶೆಟ್ಟಿ, ಕೊಡಿಯಾಲ್‍ಬೈಲ್
ಮ೦ಗಳವಾರ, ಜನವರಿ 13 , 2015

ಯಕ್ಷಗಾನ ರಂಗದಲ್ಲಿ ಪುಂಡು ವೇಷ ಅನ್ನುವುದು ಎಲ್ಲ ವಯೋ ವರ್ಗದ ಪ್ರೇಕ್ಷಕರನ್ನು ಸೆಳೆಯಬಲ್ಲ ವೇಷ. ತೆಂಕುತಿಟ್ಟು ಯಕ್ಷಗಾನದಲ್ಲಿ ಪುಂಡು ವೇಷಧಾರಿಗಳಾಗಿ ಪ್ರಸಿದ್ಧರಾದ ಕ್ರಿಶ್ಚಿಯನ್ ಬಾಬು, ಪುತ್ತೂರು ಶ್ರೀಧರ ಭಂಡಾರಿ ಅವರ ಬಳಿಕ ಯಕ್ಷವಲಯದಲ್ಲಿ ಪ್ರಚಲಿತವಿರುವ ಮತ್ತೊಂದು ಹೆಸರು ದಿವಾಕರ ರೈ ಸಂಪಾಜೆ ಅವರದ್ದು. ಅಭಿಮನ್ಯು, ಅಶ್ವತ್ತಾಮ, ಬಬ್ರುವಾಹನ, ಲವ-ಕುಶ, ಚಂಡ-ಮುಂಡ, ಸುದರ್ಶನ, ಲಕ್ಷ್ಮಣ ಮುಂತಾದ ವೀರರಸ ಪ್ರಧಾನ ಪಾತ್ರಗಳಲ್ಲಿ ರಂಗಸ್ಥಳದ ರಾಜನಾಗಿ ಮೆರೆಯುವ ಕಲಾವಿದ ಸಂಪಾಜೆ ದಿವಾಕರ ರೈ.

ಇವರು ನಿರ್ವಹಿಸುವ ಬಾಲ ಲೀಲೆಯ ಶ್ರೀಕೃಷ್ಣನ ಪಾತ್ರವಂತೂ ನೋಡುಗರಿಗೆ ಒಂದು ಅಪೂರ್ವ ದೃಶ್ಯ ಕಾವ್ಯ; ಕಲಾ ರಸಿಕರಿಗೆ ರಸದೌತಣ! ಸುತ್ತು ಕುಣಿತದಲ್ಲಂತೂ (ಧಿಗಿಣ) ಅದ್ಭುತ ಸಾಮಥ್ರ್ಯ ಹೊಂದಿರುವ ಈ ಯುವ ಯಕ್ಷ ಪ್ರತಿಭೆ ಇತ್ತೀಚೆಗೆ ದಾಖಲೆಯ 172 ಧಿಗಿಣ ಕುಣಿದು ನೆರೆದ ಸಹಸ್ರಾರು ಪ್ರೇಕ್ಷಕರ ಪ್ರಚಂಡ ಶಿಳ್ಳು, ಕರತಾಡನಕ್ಕೆ ಪಾತ್ರರಾಗಿದ್ದರು.

ಬಾಲ್ಯ, ಶಿಕ್ಷಣ ಹಾಗೂ ಪಾದಾರ್ಪಣೆ

ಸಂಪಾಜೆ ಬಳಿಯ ಕಲ್ಲುಗುಂಡಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶಾಲೆಯ ಶಿಕ್ಷಕ ದಾಮೋದರ ಮಾಸ್ತರ್ ಅವರು ಬಾಲಕ ದಿವಾಕರನ ಪ್ರತಿಭೆಯನ್ನು ಗುರುತಿಸಿ, ಪೋಷಿಸಿದರು. ಪ್ರಸಿದ್ಧ ಅರ್ಥಧಾರಿ ಜಬ್ಬಾರ್ ಸಮೋ ಅವರು ಈ ಎಳೆಯನಿಗೆ ಪ್ರೋತ್ಸಾಹದ ಶ್ರೀರಕ್ಷೆ ನೀಡಿದರು.

ಧರ್ಮಸ್ಥಳ ಯಕ್ಷಗಾನ ಕಲಾ ಕೇಂದ್ರಕ್ಕೆ ಸೇರಿದ ಸಂಪಾಜೆ ಅವರು ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್ ಅವರನ್ನು ಗುರುವಾಗಿ ಸ್ವೀಕರಿಸಿ ಅವರಿಂದ ಯಕ್ಷಗಾನದ ಬಗ್ಗೆ ಬಹಳಷ್ಟು ಅಭ್ಯಸಿಸಿದರು. ಪ್ರಖ್ಯಾತ ಬಣ್ಣದ ವೇಷ ಧಾರಿಯಾಗಿದ್ದ ಬಣ್ಣದ ಮಾಲಿಂಗ ಅವರಿಂದ ಬಣ್ಣಗಾರಿಕೆಯನ್ನೂ ಕಲಿತರು.

ದಿಗ್ಗಜರಿ೦ದ ಪ್ರಚ೦ಡ ಪು೦ಡು ವೇಷಧಾರಿಯಾಗಿ ರೂಪು

ಶ್ರೀ ಧರ್ಮಸ್ಥಳ ಮೇಳದೊಂದಿಗೆ ಯಕ್ಷ ತಿರುಗಾಟ ಆರಂಭಿಸಿದ ದಿವಾಕರ್ ರೈ ಅವರು ಸ್ತ್ರೀ ಪಾತ್ರಧಾರಿಯಾಗಿ ರಂಗಪ್ರವೇಶಗೈದರು. ಧರ್ಮಸ್ಥಳ ಮೇಳದಲ್ಲಿದ್ದ ಪ್ರಸಿದ್ಧ ಪುಂಡುವೇಷಧಾರಿ ಪುತ್ತೂರು ಶ್ರೀಧರ ಭಂಡಾರಿಯವರ ಅಮೋಘ ಪಾತ್ರ ನಿರ್ವಹಣೆ ಸಂಪಾಜೆ ಅವರಿಗೆ ವಿಶೇಷ ಪ್ರೇರಣೆ ನೀಡಿತು. ಸಂಪಾಜೆ ಅವರು ಶ್ರೀಧರ ಭಂಡಾರಿ ಅವರಿಂದ ಹೆಜ್ಜೆಗಾರಿಕೆ, ನಾಟ್ಯವನ್ನು ಆಭ್ಯಸಿಸಿದರು. ಮೇಳದಲ್ಲಿ ಹಿರಿಯ ಭಾಗವತರಾಗಿದ್ದ ಕಡತೋಕ ಮಂಜುನಾಥ ಭಾಗವತ ಅವರೂ ಸೂಕ್ತ ಬೆಂಬಲ ನೀಡಿದರು. ಈ ಮೂಲಕ ಸಂಪಾಜೆ ಅವರು ಸಮರ್ಥ ಪುಂಡುವೇಷಧಾರಿಯಾಗಿ ರೂಪುಗೊಂಡರು.

ಆ ಬಳಿಕ ಕುಂಟಾರು, ಎಡನೀರು ಮೇಳಗಳಲ್ಲಿ ತಿರುಗಾಟ ನಿರ್ವಹಿಸಿದ ಇವರು ಕಳೆದ 8 ವರ್ಷಗಳಿಂದ ಹೊಸನಗರ ಮೇಳದಲ್ಲಿ ಪ್ರಧಾನ ಕಲಾವಿದನಾಗಿ ತನ್ನ ಅಭಿನಯ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ.

ದಿವಾಕರ ರೈ , ಸಂಪಾಜೆ
ಜನನ : ಎಪ್ರಿಲ್ 15, 1977
ಜನನ ಸ್ಥಳ : ಸಂಪಾಜೆ, ಸುಳ್ಯ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಪು೦ಡು ವೇಷಧಾರಿಯಾಗಿ ಧರ್ಮಸ್ಥಳ, ಕುಂಟಾರು, ಎಡನೀರು ಮೇಳಗಳಲ್ಲಿ ತಿರುಗಾಟ ನಿರ್ವಹಿಸಿ, ಪ್ರಸ್ತುತ 8 ವರ್ಷಗಳಿಂದ ಹೊಸನಗರ ಮೇಳದಲ್ಲಿ ಕಲಾಸೇವೆ.

ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ
ಸಂಪಾಜೆ ದಿವಾಕರ ರೈ ಅವರು ಬಡಗುತಿಟ್ಟಿನ ಕೆಲವು ಜನಪ್ರಿಯ ನಾಟ್ಯ ಭಂಗಿಗಳನ್ನು ತಾನು ಅಳವಡಿಸುವ ಮೂಲಕ ತೆಂಕುತಿಟ್ಟು ಯಕ್ಷನಾಟ್ಯಕ್ಕೆ ಹೊಸ ಆಯಾಮ ನೀಡಿದ್ದಾರೆ. ಹಿತ ಮಿತವಾದ ಮಾತುಗಾರಿಕೆ, ಪಾದರಸ ದಂತಹ ರಂಗಚಲನೆ ಮತ್ತು ಮನ ಸೂರೆಗೊಳ್ಳುವ ನಾಟ್ಯಭಂಗಿಗಳಿಂದ ಅಪಾರ ಅಭಿಮಾನಿ ಬಳಗವನ್ನು ಇವರು ಸಂಪಾದಿಸಿಕೊಂಡಿದ್ದಾರೆ.

ಸಂಪಾಜೆ ಯಕ್ಷೋತ್ಸವದಲ್ಲಿ ದಾಖಲೆಯ ಸಾವಿರ ಗಿರಕಿ

ಇತ್ತೀಚೆಗೆ ನಡೆದ ಸಂಪಾಜೆ ಯಕ್ಷೋತ್ಸವದಲ್ಲಿ ತೆಂಕುತಿಟ್ಟಿನ ಇನ್ನೋರ್ವ ಯುವ ಪುಂಡುವೇಷಧಾರಿ ಚಂದ್ರಶೇಖರ ಧರ್ಮಸ್ಥಳ ಅವರೊಂದಿಗೆ ಸುದರ್ಶನ ಪಾತ್ರಧಾರಿಯಾಗಿ ಸಂಪಾಜೆ ಅವರು ಸತತ ಇಪ್ಪತ್ತು ನಿಮಿಷಕ್ಕೂ ಅಧಿಕ ಕಾಲ ರಂಗಸ್ಥಳದಲ್ಲಿ 1 ಸಾವಿರಕ್ಕೂ ಹೆಚ್ಚು ಗಿರಕಿ ಹೊಡೆದು ಯಕ್ಷಗಾನದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಯ್ಯೋ ಇದರಲ್ಲೇನು ವಿಶೇಷ ಅಂತೀರಾ..? ಇದರಲ್ಲೇ ಇರೋದು ವಿಶೇಷ. ಸಾಮಾನ್ಯವಾಗಿ ನಾವು ನಿಂತಲ್ಲೇ 10ರಿಂದ 15 ಸುತ್ತು ಸುತ್ತಿದ ತಕ್ಷಣ ನಮಗೆ ತಲೆ ಸುತ್ತಿದ ಅನುಭವವಾಗುತ್ತದೆ. ಆದರೆ ಈ ಇಬ್ಬರು 1 ಸಾವಿರಕ್ಕೂ ಹೆಚ್ಚ ಸುತ್ತುಹಾಕಿ ಒಬ್ಬರಿಗೊಬ್ಬರು ಸ್ಪರ್ಧೆಗೆ ನಿಂತುಬಿಟ್ಟರು.

ಬೆಳಗ್ಗೆ 7.05ಕ್ಕೆ ಆರಂಭಗೊಂಡ ಭಾಗವತರ ಹಾಡು ಮುಕ್ತಾಯವಾಗಿದ್ದು ಸರಿ ಸುಮಾರು 7.30ರ ಹೊತ್ತಿಗೆ. ಆರಂಭದಲ್ಲಿ ಇವರು ಇಷ್ಟು ಹೊತ್ತು ಧೀಂಗಿಣ ಹಾಕುತ್ತಾರೆ ಎಂದು ಪ್ರೇಕ್ಷಕರು ಎಣಿಸಿಯೇ ಇರಲಿಲ್ಲ. ಆದರೆ ಐದು ನಿಮಿಷದ ಬಳಿಕವೂ ಇವರು ಕುಣಿಯುತ್ತಿರುವುದನ್ನು ನೋಡಿ ಪ್ರೇಕ್ಷಕರು ಶಿಳ್ಳೆ ಹಾಕಲು ಆರಂಭಿಸಿದರು. ಇದರಿಂದ ಮತ್ತಷ್ಟು ಉತ್ತೇಜಿತರಾಗಿ ಇವರು ಸುತ್ತುವುದನ್ನು ನಿಲ್ಲಿಸಲಿಲ್ಲ.

ಕೊನೆಗೆ ಕೆಲ ಜನ ನಿಲ್ಲಿಸಿ ಎಂದು ಬೊಬ್ಬೆ ಹಾಕಿದ್ರೆ ಮತ್ತೆ ಕೆಲವರು ಕುಣಿಯಿರಿ ಕುಣಿಯಿರಿ ಎಂದು ಪ್ರೋತ್ಸಾಹ ನೀಡುತ್ತಿದ್ದರು. ಈ ಇಬ್ಬರು ಕಲಾವಿದರು ಕುಣಿತ ನಿಲ್ಲಿಸುವುದಿಲ್ಲ ಎನ್ನುವದನ್ನು ಅರಿತ ಸಂಘಟಕರು ಕೊನೆಗೆ ವೇದಿಕೆ ಸೂಚನೆ ನೀಡಿದಾಗ ಕಲಾವಿದರು ತಮ್ಮ ಕುಣಿತವನ್ನು ನಿಲ್ಲಿಸಿದರು. ನಿರಂತರ 20ಕ್ಕೂ ಹೆಚ್ಚು ನಿಮಿಷದ ಅವಧಿಯಲ್ಲಿ ಸರಿ ಸುಮಾರು ಸಾವಿರಕ್ಕೂ ಅಧಿಕ ಗಿರಕಿ ಹೊಡೆಯುವ ಮೂಲಕ ಯಕ್ಷಗಾನದ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿಯೂ ಆಗಿತ್ತು.

ಕುಣಿತ ನಿಲ್ಲುತ್ತಿದ್ದಂತೆ ಐದು ಸಾವಿರಕ್ಕೂ ಅಧಿಕ ಪ್ರೇಕ್ಷಕ ವರ್ಗ ನಿಂತು ಇಬ್ಬರು ಕಲಾವಿದರಿಗೆ ಅಭಿನಂದನೆ ಸಲ್ಲಿಸಿದರು. ಸಂಪಾಜೆ ಯಕ್ಷಗಾನ ಪ್ರತಿಷ್ಠಾನವು ಇಬ್ಬರ ಸಾಧನೆ ಗುರುತಿಸಿ ತಲಾ 10 ಸಾವಿರ ರೂ. ಬಹುಮಾನ ನೀಡಿ ಗೌರವಿಸಿತು.

ಶ್ಯಾಮ್ ಭಟ್ ಅವರಿಗೆ ತುಂಬು ಕೃತಜ್ಞತೆ

ದಿವಾಕರ ರೈ ಸಂಪಾಜೆ ಅವರು ತನ್ನನ್ನು ಆರ್ಥಿಕವಾಗಿ ಪ್ರೋತ್ಸಾಹಿಸಿದ ಕಲಾಪೋಷಕ ಶ್ಯಾಮ್ ಭಟ್ ಅವರಿಗೆ ತುಂಬು ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ದಣಿವರಿಯದ ಪುಂಡುವೇಷಧಾರಿಯಾಗಿ, ಯಕ್ಷರಸಿಕರ ಕಣ್ಮಣಿಯಾಗಿ ರುವ 37ರ ಹರೆಯದ ಸಂಪಾಜೆ ದಿವಾಕರ ರೈ ಅವರ ಯಕ್ಷರಂಗದ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಹಾರೈಸೋಣ.



****************

ದಿವಾಕರ ರೈಯರವರ ಕೆಲವು ಛಾಯಾ ಚಿತ್ರಗಳು



( ಕೃಪೆ : ರಾಮ್ ನರೇಶ್ ಮ೦ಚಿ, ಲಕ್ಷ್ಮಿ ಡಿಜಿಟಲ್ ಸ್ಟುಡಿಯೊ, ಕೃಷ್ಣ ಕುಮಾರ್, ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )




ಬೇಡಿಕೆಯ ಅಭಿಮನ್ಯುವಿನ ಪಾತ್ರದಲ್ಲಿ ಪ್ರಸಿಧ್ಧ ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರೊ೦ದಿಗೆ













ಸಮಾರ೦ಭವೊ೦ದರಲ್ಲಿ ಸನ್ಮಾನ




****************

ದಿವಾಕರ ರೈಯರವರ ಕೆಲವು ದೃಶ್ಯಾವಳಿಗಳು

ಸಂಪಾಜೆ ಯಕ್ಷೋತ್ಸವದಲ್ಲಿ ದಾಖಲೆಯ ಸಾವಿರ ಗಿರಕಿ




ಪ್ರವೇಶದ ಒ೦ದು ದೃಶ್ಯ




ಅಮೋಘ ನಾಟ್ಯದ ದೃಶ್ಯ




ತುಳು ಪ್ರಸ೦ಗವೊ೦ದರ ದೃಶ್ಯಾವಳಿ




ಶ್ರೀನಿವಾಸ ಕಲ್ಯಾಣದಲ್ಲಿ ಶ್ರೀನಿವಾಸನ ಪಾತ್ರದಲ್ಲಿ




ಕೃಪೆ : www.jayakirana.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ